ನಾಡಿನ ನಕ್ಷೆಯ ಮಧ್ಯದಲ್ಲಿರುವ ಹಾವೇರಿ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ, ಯಾಲಕ್ಕಿ ಕಂಪಿನ ಈ ಜಿಲ್ಲೆಯಲ್ಲಿ ಭಾವೈಕ್ಯತೆ ಹರಿಕಾರ ಕನ್ನಡದ ಕಬೀರ, ಜಾನಪದ ಸಂತಕವಿ ಶಿಶುನಾಳ ಶರೀಫ, ದಾಸ ಶ್ರೇಷ್ಠರಾದ ಕನಕದಾಸರು, ಜನಕವಿ ಸರ್ವಜ್ಞ , ಕಾವ್ಯ ಕೃಷಿ ಮಾಡಿದ್ದಾರೆ. ಕಾದಂಬರಿಗಳ ಪಿತಾಮಹ ಗಳಗನಾಥ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ. ಗೋಕಾಕ, ಆಧುನಿಕ ವಚನಕಾರ ಡಾ. ಮಹದೇವ ಬಣಕಾರ, ಶ್ರೇಷ್ಠ ಕವಿ ಸು.ರಂ. ಯಕ್ಕುಂಡಿ, ಶಿಕ್ಷಣ ತಜ್ಞ ಎಸ್.ಎಸ್. ಒಡೆಯರ, ಹಿರಿಯ ಪತ್ರಕರ್ತ ನಾಡೋಜ, ಡಾ. ಪಾಟೀಲ್ ಪುಟ್ಟಪ್ಪನಂತಹ ದಿಗ್ಗಜರು ಈ ನೆಲದ ಕುಡಿಗಳು.
ಸಂಗೀತ ಕ್ಷೇತ್ರದ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು, ಗಂಗೂಬಾಯಿ ಹಾನಗಲ್ಲ, ಚಂದ್ರಶೇಖರ ಪುರಾಣಿಕಮಠ, ಮುಂತಾದವರ ಮೂಲನೆಲೆ ಈ ಜಿಲ್ಲೆಯದು ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ವೈಶಿಷ್ಠಪೂರ್ಣ ಪರಂಪರೆ ಹೊಂದಿರುವ ಹಾವೇರಿ ಜಿಲ್ಲೆ ಪ್ರಾಚೀನ ದೇವಾಲಯಗಳ ತೆಕ್ಕೆಯಲ್ಲಿ ಪವಡಿಸಿದೆ. ಈ ವೈಶಿಷ್ಠಪೂರ್ಣ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ. ಸವಣೂರ ವಿಳ್ಯೆದೆಲೆ ಉತ್ಪಾದನೆಯಲ್ಲಿ ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿದೆ.
ಭಾರತ-ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜೊತೆ ಮೋಟೆಬೆನ್ನೂರಿನ ಹುತಾತ್ಮ ಮೈಲಾರ ಮಹದೇವಪ್ಪನವರು, ಹಾನಗಲ್ಲ ತಾಲೂಕಿನ ಕನ್ನೇಶ್ವರ ರಾಮ, ಹಳ್ಳಿಕೇರಿ ಗುದ್ಲೆಪ್ಪನವರು, ಹೊಸಮನಿ ಸಿದ್ಧಪ್ಪನವರು, ಮೆಣಸಿನಹಾಳದ ತಿಮ್ಮನಗೌಡರು, ವೀರಯ್ಯ ಹಿರೇಮಠ, ತಿರಕಪ್ಪಮಡಿವಾಳರ, ಹಾಗೂ ಸಂಗೂರು ಕರಿಯಪ್ಪನವರು ಮುಂತಾದವರು ಬ್ರಿಟೀಷರ ವಿರುದ್ಧ ಸಿಡಿದೆದ್ದವರು. ಈ ರೀತಿ ಹಾವೇರಿ ಜಿಲ್ಲೆ ವಿವಿಧ ಕ್ಷೇತ್ರಗಳಲ್ಲಿ ಮೊದಲಿನಿಂದಲೂ ಮಂಚೂಣಿಯಲ್ಲಿದೆ.