ಹಾವೇರಿ ಜಿಲ್ಲೆ ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿದ್ದು ಉತ್ತರದ ಬೀದರ ಮತ್ತು ದಕ್ಷಿಣದ ಕೊಳ್ಳೆಗಾಲ ಇವುಗಳಿಗೆ ಸಮಾನ ಅಂತರದಲ್ಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಬ್ಬಾಗಿಲು ಜಿಲ್ಲೆ ಎಂದು ಸಹ ಪ್ರಸಿದ್ಧಿಯಾಗಿದೆ. ಹಾವೇರಿ ಜಿಲ್ಲೆಯು ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ.
ಸಂತ ಶಿಶುನಾಳ ಶರೀಫರು, ಭಕ್ತಶ್ರೇ಼ಷ್ಟ ಕನಕದಾಸರು, ವರಕವಿ ಸರ್ವಜ್ಞ, ಹಾನಗಲ್ ಕುಮಾರ ಶಿವಯೋಗಿಗಳು, ವಾಗೀಶ ಪಂಡಿತಾರಾಧ್ಯರು, ಕಾದಂಬರಿ ಪಿತಾಮಹ ಗಳಗನಾಥರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ:ವಿನಾಯಕ ಕೃಷ್ಣ ಗೋಕಾಕರು ಮುಂತಾದ ಮಹನಿಯರುಗಳಿಗೆ ಜನ್ಮನೀಡಿದ ಹೆಮ್ಮೆಯ ಜಿಲ್ಲೆ ಹಾವೇರಿ. ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮ ಮೈಲಾರ ಮಹದೇವಪ್ಪನವರು ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನವರು. ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಹಳ್ಳಿಕೇರಿ ಗುದ್ಲೆಪ್ಪನವರು ಹಾವೇರಿ ಜಿಲ್ಲೆಯ ಹೊಸರಿತ್ತಿಯವರು. ಅವರು ಅಲ್ಲಿಯೇ ಗುರುಕುಲ ಮಾದರಿಯಲ್ಲಿ ಗಾಂಧೀ ಗ್ರಾಮೀಣ ಗುರುಕುಲ ಎಂಬ ಹೆಸರಿನ ಶಾಲೆಯನ್ನು ಆರಂಭಿಸಿದ್ದಾರೆ.
ಹಾವೇರಿ ಜಿಲ್ಲೆಯು ಗದಗ ಜಿಲ್ಲೆಯನ್ನು ಒಳಗೊಂಡಂತೆ ಮೊದಲು ಧಾರವಾಡ ಜಿಲ್ಲೆಯ ಭಾಗವಾಗಿತ್ತು. ಇಲ್ಲಿನ ಜನರ ಬೇಡಿಕೆಯಂತೆ ಬಹುದಿನಗಳ ಹೋರಾಟದ ನಂತರ ಧಾರವಾಡ ಜಿಲ್ಲೆಯಿಂದ ವಿಭಜಿಸಲ್ಪಟ್ಟ ಹಾವೇರಿ ಜಿಲ್ಲೆ ದಿನಾಂಕ: 24.08.1997 ರಂದು ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು.
ಹಾವೇರಿ ಜಿಲ್ಲೆ ಸಾಕಷ್ಟು ಐತಿಹಾಸಿಕ ಹಿನ್ನೆಲೆಯನ್ನು ಸಹ ಹೊಂದಿದೆ. ಹಾವೇರಿ ಜಿಲ್ಲೆ ತುಂಗಭದ್ರಾ ಮತ್ತು ವರದಾ ನದಿ ಪಾತ್ರದಲ್ಲಿ ಬರುತ್ತಿದ್ದು ಜನರ ಇತಿಹಾಸ ಪೂರ್ವ ನಾಗರಿಕತೆ ಬಗ್ಗೆ ಸಾಕಷ್ಟು ಐತಿಹ್ಯಗಳು ಕಾಣಸಿಗುತ್ತವೆ. ಶಿಲ್ಪಕಲಾ ವೈಭವವನ್ನು ತೋರಿಸುವ ಹಲವಾರು ಕುರುಹುಗಳ ಜಿಲ್ಲೆಯಾದ್ಯಂತ ಕಾಣಸಿಗುತ್ತವೆ. ಚಾಲುಕ್ಯ, ರಾಷ್ಟ್ರಕೂಟರ ಕಾಲದ ಸುಮಾರು 1300 ಶಿಲಾಶಾಸನಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ. ರಾಜ್ಯದ ಯಾವುದೇ ಸಂಸ್ಥಾನಗಳು ಹಾವೇರಿ ಜಿಲ್ಲೆಯಲ್ಲಿ ರಾಜಧಾನಿಯನ್ನು ಹೊಂದಿರದೇ ಇದ್ದರೂ, ಹಲವಾರು ಮಾಂಡಲಿಕರು ಆಳಿ ಹೋಗಿದ್ದಾರೆ.
ಬಂಕಾಪುರದ ಚಳ್ಳಕೇತರು, ಗುತ್ತವುಲದ ಗುತ್ತರು, ಹಾನಗಲ್ಲಿನ ಕದಂಬರು ಹೆಸರಾಂತ ಸಾಮಂತರು ಸಹ ಆಳಿದ್ದಾರೆ. ಕನ್ನಡದ ಆದಿಕವಿ ಪಂಪನ ಗುರುಗಳಾದ ದೇವೆಂದ್ರಮುನಿಗಳು, ರನ್ನ ಚಾವುಂಡರಾಯನ ಗುರುಗಳಾದ ಅಜಿತ ಸೇನಾಚಾರ್ಯರು ಹಾವೇರಿ ಜಿಲ್ಲೆಯ ಬಂಕಾಪೂರದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಬಂಕಾಪುರವು ಹೊಯ್ಸಳ ವಿಷ್ಣುವರ್ಧನರ ಎರಡನೇ ರಾಜಧಾನಿಯಾಗಿತ್ತು. ಗುತ್ತರು 12ನೇ ಶತಮಾನದ ಮಧ್ಯಭಾಗದಿಂದ 13ನೇ ಶತಮಾನದ ಅಂತ್ಯದವರೆಗೂ ಚಾಲುಕ್ಯರ ಮಾಂಡಳಿಕರಾಗಿ ಗುತ್ತವೊಲ (ಈಗಿನ ಗುತ್ತಲ) ಗ್ರಾಮದಿಂದ ಆಡಳಿತ ನಡೆಸಿರುತ್ತಾರೆ. ಅದೇ ರೀತಿ ಸೇವುಣರ ಮಾಂಡಳಿಕರಾಗಿಯೂ ದೇವಗಿರಿಯಲ್ಲಿ ಆಡಳಿತ ನಡೆಸಿರುತ್ತಾರೆ. ಗುತ್ತಲ ಸಮೀಪದ ಚೌಡಯ್ಯದಾನಪುರದಲ್ಲಿ ಕಂಡುಬರುವ ಶಾಸನದ ಪ್ರಕಾರ ಮಲ್ಲಿದೇವನು ಚಾಲುಕ್ಯರ 6ನೇ ವಿಕ್ರಮಾದಿತ್ಯನ ಮಾಂಡಳಿಕನಾಗಿದ್ದ ಬಗ್ಗೆ ಉಲ್ಲೇಖವಿದೆ. ಮಲ್ಲಿದೇವನು ಚೌಡಯ್ಯದಾನಪುರದಲ್ಲಿ ಮುಕ್ತೇಶ್ವರ ದೇವಸ್ಥಾನವನ್ನು ನಿರ್ಮಿಸಿದ ಎನ್ನಲಾಗಿದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನೊಣಂಬರು ರಟ್ಟಿಹಳ್ಳಿಯನ್ನು ರಾಜಧಾನಿಯನ್ನಾಗಿಸಿಕೊಂಡು ಸುಮಾರು 100 ಗ್ರಾಮಗಳನ್ನು ಆಳಿದರು ಎನ್ನಲಾಗಿದೆ. ರಟ್ಟೀಹಳ್ಳಿಯಲ್ಲಿ ಚಾಲುಕ್ಯ ಶೈಲಿಯ ಸುಂದರ ಕದಂಬೇಶ್ವರ ದೇವಸ್ಥಾನವನ್ನು ಕಾಣಬಹುದು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಳ್ವಿಕೆ ನಡೆಸಿದ ಸಾಮಂತರುಗಳು ಹಾವೇರಿ ಜಿಲ್ಲೆಯ ಇತಿಹಾಸದಲ್ಲಿ ಸಾಕಷ್ಟು ಕುರುಹುಗಳನ್ನು ಬಿಟ್ಟುಹೋಗಿರತ್ತಾರೆ. ಹಾನಗಲ್ಲಿನ ತಾರಕೇಶ್ವರ ದೇವಸ್ಥಾನ, ರಟ್ಟೀಹಳ್ಳಿಯ ಕದಂಬೇಶ್ವರ ದೇವಸ್ಥಾನ, ಹರಳಹಳ್ಳಿಯ ಸೋಮೇಶ್ವರ ದೇವಸ್ಥಾನ, ಬಂಕಾಪುರದ ನಗರೇಶ್ವರ ದೇವಸ್ಥಾನ, ಚೌಡಯ್ಯದಾನಪುರದ ಮುಕ್ತೇಶ್ವರ ದೇವಸ್ಥಾನ ಹಾವೇರಿಯ ಪುರಸಿದ್ಧೇಶ್ವರ ದೇವಸ್ಥಾನ, ಗಳಗನಾಥದ ಈಶ್ವರ ದೇವಸ್ಥಾನ, ಯಳವಟ್ಟಿಯ ಜೈನ ಬಸದಿ ಇವಗಳು ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿಯ ಮೆರುಗನ್ನು ಎತ್ತಿ ತೋರಿಸುತ್ತವೆ.